ತುಕ್ಕುರೋಗ  -
ಬೆಸಿಡಿಯೋಮೈಸೀಟ್ಸ್ ವರ್ಗದ ಯುರೆಡಿನೇಲೀಸ್ ಗುಂಪಿಗೆ ಸೇರಿದ ಕೆಲವು ಶಿಲೀಂಧ್ರಗಳು ಸಸ್ಯಗಳ ಮೇಲೆ ಉಂಟುಮಾಡುವ ಕಂದು ಕೆಂಪು ಬಣ್ಣದ ಮಚ್ಚೆಗಳಿಂದ ಕೂಡಿದ ಒಂದು ರೋಗ (ರಸ್ಟ್). ಈ ಶಿಲೀಂಧ್ರಗಳು ಆಬದ್ಧ ಪರಾವಲಂಬಿಗಳು (ಅಬ್ಲಿಗೇಟ್ ಪ್ಯಾರಾಸೈಟ್ಸ್). ಇವು ಬೇರೊಂದು ಉಪಯುಕ್ತ ಆತಿಥೇಯ ಸಸ್ಯದ ಮೇಲೆ ಪರಾವಲಂಬಿಯಾಗಿ ಬೆಳೆದು ಅಪಾರ ಹಾನಿಯನ್ನು ಉಂಟುಮಾಡುತ್ತವೆ. ಉದಾಹರಣೆಗೆ ಗೋದಿ ಮುಂತಾದ ಆಹಾರ ಬೆಳೆಗಳಿಗೆ ಬರುವ ಕಾಂಡ ತುಕ್ಕು ರೋಗ, ಎಲೆ ತುಕ್ಕು ರೋಗ, ಕಾಫಿ ತುಕ್ಕು ರೋಗ, ಬ್ಲಿಸ್ಟರ್ ರಸ್ಟ್ ಆಫ್ ಪೈನ್, ಹುರುಳಿ ತುಕ್ಕು ರೋಗ ಮುಂತಾದವು. ಆಹಾರ ಧಾನ್ಯ ಬೆಳೆಗಳಿಗೆ ತಾಗುವ ತುಕ್ಕು ರೋಗ ಆಶ್ರಯ ಸಸ್ಯಗಳಿಗೆಲ್ಲ ಮಾರಕವಾಗಿದೆ. ಈ ಗುಂಪಿನ ಶಿಲೀಂಧ್ರಗಳಲ್ಲಿ ಸುಮಾರು 1700 ಪ್ರಭೇದಗಳಿವೆ. ತುಕ್ಕು ರೋಗದ ವಿವಿಧ ಬಗೆಗಳು ಸಸ್ಯರೋಗಶಾಸ್ತ್ರದಲ್ಲಿ ಅತ್ಯಂತ ಮುಖ್ಯವೆನಿಸಿವೆ.

	ಪ್ರಾಚೀನ ರೋಮನರಲ್ಲಿ ತುಕ್ಕುರೋಗ ರೋಬಿಗಸ್ ಮತ್ತು ರೋಬಿಗೋ ಎಂಬ ದೇವತೆಗಳ ಅತೃಪ್ತಿಯಿಂದ ಉಂಟಾಗುವಂಥದು ಎಂಬ ನಂಬಿಕೆ ಇತ್ತು. ಈ ದೇವತೆಗಳನ್ನು ಸಂತೃಪ್ತಿಗೊಳಿಸಲು ರೋಬಿಗಾಲಿಯಾ ಎಂಬ ಹಬ್ಬವನ್ನು ರೋಮನರು ಆಚರಿಸುತ್ತಿದ್ದರು. ತುಕ್ಕುರೋಗದ ಸಾಮಾನ್ಯ ಲಕ್ಷಣಗಳು : ತುಕ್ಕುರೋಗ ತಗುಲಿದ ಸಸ್ಯಗಳ ಎಲೆ, ಕಾಂಡ, ತೆನೆ, ಕಾಯಿ ಮುಂತಾದ ಭಾಗಗಳ ಮೇಲ್ಭಾಗದಲ್ಲಿ ಕಂದುಕೆಂಪು, ನಸು ಹಳದಿ ಕೆಂಪು ಮತ್ತು ಕಪ್ಪು ಬಣ್ಣದ ಸಣ್ಣ ಸಣ್ಣ ಮಚ್ಚೆಗಳು ಕಾಣಿಸುತ್ತವೆ. ಇವನ್ನು ಬೆರಳಿನಿಂದ ಸವರಿದರೆ ತುಕ್ಕಿನ ಬಣ್ಣದ ಪುಡಿ ಅಂಟಿಕೊಳ್ಳುತ್ತದೆ. ಇವು ತುಕ್ಕುರೋಗದ ಬೀಜಕಗಳು. (ಸ್ಟೋರ್ಸ್). ತುಕ್ಕುರೋಗಕಾರಕ ಶಿಲೀಂಧ್ರದ ಮೈಸಿಲೀಯಮ್‍ಗಳು ಆತಿಥೇಯ ಸಸ್ಯಗಳ ಜೀವಕೋಶಗಳ ನಡುವೆ ಇರುವ ಸಂದುಗಳಲ್ಲಿ ಪ್ರಸರಿಸಿ ಜಾಲದಂತಿರುವ ಬಲೆಯನ್ನು ರೂಪಿಸಿ ಆ ಕೋಶಗಳಿಂದ ಹಾಸ್ಟೋರಿಯಾ ಎಂಬ ರಚನೆಗಳ ಸಹಾಯದಿಂದ ಪೋಷಕಾಂಶವನ್ನು ಪಡೆಯುತ್ತವೆ. ಹಾಸ್ಟೋರಿಯಾದ ಜೀವಧಾತು ಅತಿಸೂಕ್ಷ್ಮ ರಂಧ್ರಗಳ ಮೂಲಕ ಆತಿಥೇಯ ಸಸ್ಯದ ಜೀವಕೋಶದ ಜೀವಧಾತುವಿನೊಡನೆ ಸಂಬಂಧ ಕಲ್ಪಿಸಿಕೊಂಡು ಪೋಷÀಕಾಂಶವನ್ನು ಪಡೆಯುತ್ತದೆಂದು ಏರ್ಲಿಕ್ (1961) ಎಂಬವನ ಅಭಿಪ್ರಾಯ.

	 ತುಕ್ಕುರೋಗದ ಮೈಸೀಲಿಯಮ್‍ಗಳು ಆಶ್ರಯ ಸಸ್ಯಗಳ ಒಳ ಅಂಗಾಂಶಗಳನ್ನು ಪ್ರವೇಶಿಸಿ ಅವುಗಳಲ್ಲಿ ಗಂಟುಗಳ ಅಥವಾ ಅಂಗಾಂಗಗಳಲ್ಲಿ ವಿಚ್ಛಿದ್ರ ಮಾರ್ಪಾಟುಗಳನ್ನು ಕೂಡಮಾಡಬಲ್ಲವು. ಈ ಗುಂಪಿನ ಶಿಲೀಂಧ್ರಗಳ ಮೈಸೀಲಿಯಮ್‍ನಲ್ಲಿ ಮೊದಲು ಒಂದು ನ್ಯೂಕ್ಲಿಯಸ್ ಇದ್ದು ಅನಂತರ ಎರಡು ನ್ಯೂಕ್ಲಿಯಸ್‍ಗಳು ಉಂಟಾಗುವುವು. ಕೆಲವು ಬಗೆಗಳಲ್ಲಿ ಎರಡು ನ್ಯೂಕ್ಲಿಯಸ್ ಇರುವ ಮೈಸೀಲಿಯಮ್‍ನಲ್ಲಿ ಕ್ಲ್ಯಾಂಪ್ ಕನೆಕ್ಷನ್‍ಗಳು ಇರುವುದುಂಟು.

	ತುಕ್ಕು ರೋಗವನ್ನು ಉಂಟುಮಾಡುವ ಶಿಲೀಂಧ್ರ ಅಬದ್ಧ ಪರಾವಲಂಬಿ  ಅಂದರೆ, ಆತಿಥೇಯ ಸಸ್ಯದ ಜೀವಧಾತುವಿನಿಂದ ಮಾತ್ರ ಪೋಷಕಾಂಶವನ್ನು ಪಡೆಯಬಲ್ಲವಲ್ಲದೇ ನಿರ್ಜೀವ ರಾಸಾಯನಿಕ ಧಾತುಗಳ ಮೇಲೆ ಬೆಳೆಯಲಾರವು. 1951ರ ವರೆಗೂ ತುಕ್ಕುರೋಗ ಶಿಲೀಂಧ್ರಗಳನ್ನು ಆತಿಥೇಯ ಸಸ್ಯದಿಂದ ಬೇರ್ಪಡಿಸಿ ಕೃತಕ ರಾಸಾಯನಿಕ ಮಾಧ್ಯಮಗಳ ಮೇಲೆ ಬೆಳೆಸಲು ಸಾಧ್ಯವಾಗಿರಲಿಲ್ಲ. ಆದರೆ 1959ರಲ್ಲಿ ಹಾಟ್‍ಸನ್ ಮತ್ತು ಕಟರ್ ಎಂಬಿಬ್ಬರು ವಿಜ್ಞಾನಿಗಳು ಜಿಮ್ನೊಸ್ಪೊರಾಂಜಿಯಮ್ ಜ್ಯೂನಿಪೆರಿ ವರ್ಜಿನೀಯಾನೆ ಎಂಬ ತುಕ್ಕು ರೋಗ ಕಾರಕ ಶಿಲೀಂಧ್ರವನ್ನು ಕೃತಕ ರಾಸಾಯನಿಕ ಮಾಧ್ಯಮಗಳ ಮೇಲೆ ಬೆಳೆಸಿದರು. ಇತ್ತೀಚೆಗೆ ಇನ್ನೂ ಕೆಲವು ತುಕ್ಕುರೋಗಕಾರಕ ಶಿಲೀಂಧÀ್ರಗಳನ್ನು ಹೀಗೆ ಬೆಳೆಸಲಾಗಿದೆ. ಇದು ತುಕ್ಕುರೋಗ ಶಿಲೀಂಧÀ್ರಗಳ ಸಂಶೋಧನೆಯಲ್ಲಿ ಒಂದು ಅಮೋಘ ಸಾಧನೆಯೆನಿಸಿದೆ.

	ತುಕ್ಕುರೋಗ ಶಿಲೀಂಧÀ್ರಗಳಲ್ಲಿ ಬೆಸಿಡಿಯೋಕಾರ್ಪ್‍ಗಳನ್ನು ಕಾಣಲಾಗುವುದಿಲ್ಲ. ಇದರ ಬದಲು ಎರಡು ನ್ಯೂಕ್ಲಿಯಸ್ ಇರುವ ಹೈಫದ ತುದಿಗಳಿಂದ ಟೆಲ್ಯುಟೋಸ್ಪೋರ್ ಎಂಬ ಬೀಜಕಗಳು ಉತ್ಪತ್ತಿಯಾಗುತ್ತವೆ. ಟೆಲ್ಯುಟೋಸ್ಪೋರುಗಳಲ್ಲಿ ನ್ಯೂಕ್ಲಿಯಸ್‍ಗಳ ಸಂಯೋಗ ನಡೆದು ಅನಂತರ ದಪ್ಪ ಭಿತ್ತಿಯುಳ್ಳ ವಿಶ್ರಮಿಸುವ ಬೀಜಕಗಳು ಮೂಡುತ್ತವೆ. ಇವು ತತ್‍ಕ್ಷಣ ಅಥವಾ ಕೆಲವು ಋತುಗಳ ಅನಂತರ ಮೊಳೆಯುವುವು.

	ಟೆಲ್ಯುಟೋಸ್ಪೋರುಗಳು ಒಂದು ಜೀವಕೋಶ ಅಥವಾ ಎರಡು ಜೀವಕೋಶಗಳಿಂದ ಕೂಡಿವೆ. ಮೊದಲು ಉತ್ಪತ್ತಿಯಾದ ಟೆಲ್ಯುಟೋಸ್ಪೋರಿನಲ್ಲಿ ಎರಡು ನ್ಯೂಕ್ಲಿಯಸ್‍ಗಳಿರುವುವು. ಕೊನೆಗೆ ಕ್ಯಾರಿಯೋಗೆಮಿ ನಡೆದು ದ್ವಿಗುಣಿತ ಸಂಖ್ಯೆಯ ಕ್ರೋಮೊಸೋಮು ಉಳ್ಳ (ಡಿಪ್ಲಾಯಿಡ್) ಒಂದು ನ್ಯೂಕ್ಲಿಯಸ್ ಉಳಿಯತ್ತದೆ; ಅನುಕೂಲವಾದ ವಾತಾವರಣ ಉಂಟಾದಲ್ಲಿ ಟೆಲ್ಯುಟೋಸ್ಪೋರ್ ಮೊಳೆತು ಅದರ ಪ್ರತಿಯೊಂದು ಜೀವಕೋಶದಿಂದ ಒಂದೊಂದು ಪ್ರೊಮೈಸೀಲಿಯಮ್ ಎಂಬ ರಚನೆ ಹುಟ್ಟುತ್ತದೆ. ಡಿಪ್ಲಾಯಿಡ್ ನ್ಯೂಕ್ಲಿಯಸ್ ಪ್ರೋಮೈಸೀಲಿಯಮ್‍ಗೆ ಹೋಗಿ ಅಲ್ಲಿ ಸಂಖ್ಯಾಕ್ಷೀಣ ರೀತ್ಯಾ ವಿಭಜನೆ ಹೊಂದಿ ಏಕಗುಣಿತ ಸಂಖ್ಯೆಯ ಕ್ರೋಮೊಸೋಮು ಉಳ್ಳ (ಹ್ಯಾಪ್ಲಾಯಿಡ್) ನ್ಯೂಕ್ಲಿಯಸ್‍ಗಳನ್ನು ಉತ್ಪಾದಿಸುತ್ತದೆ. ಪ್ರೊಮೈಸೀಲಿಯಮಿನಲ್ಲಿ ಅಡ್ದಗೋಡೆಗಳು ರಚಿತವಾಗಿ ಹ್ಯಾಪ್ಲಾಯಿಡ್ ನ್ಯೂಕ್ಲಿಯಸ್ ಹೊಂದಿದ ನಾಲ್ಕು ಜೀವಕೋಶಗಳು ರಚಿತವಾಗುತ್ತವೆ. ಈ ಜೀವಕೋಶಗಳ ತುದಿಯಿಂದ ಒಂದೊಂದು ನ್ಯೂಕ್ಲಿಯಸ್ ಇರುವ ಬೆಸಿಡಿಯೋಸ್ಪೋರ್ ಎಂಬ ಬೀಜಕಗಳು ಉತ್ಪತ್ತಿಯಾಗುತ್ತವೆ. ಇವು ನೀರಿನ ಸಹಾಯದಿಂದ ಸಿಡಿದು ಗಾಳಿಗೆ ಬಿಡುಗಡೆಯಾಗುತ್ತವೆ.

	ಯುರೆÀಡಿನೇಲಿಸ್ ಇಂಪರ್ಫಕ್ಟೈ ಗುಂಪಿನ ವಿನಾ ಉಳಿದೆಲ್ಲ ತುಕ್ಕು ರೋಗಕಾರಕ ಶಿಲೀಂಧ್ರ್ರಗಳು ಟೆಲ್ಯುಟೋಸ್ಪೋರನ್ನು ಉತ್ಪತ್ತಿಮಾಡುತ್ತವೆ. ಟೆಲ್ಯುಟೋಸ್ಪೋರಿನಲ್ಲಿ ಕ್ಯಾರಿಯೋಗೆಮಿ ಮತ್ತು  ಸಂಖ್ಯಾಕ್ಷೀಣ ವಿಭಜನೆ ಉಂಟಾಗುವುದರಿಂದ ಟೆಲ್ಯುಟೋಸ್ಪೋರನ್ನು ಯುರಡಿನೇಲಿಸ್ ಪರ್ಫಕ್ಟೈಫೇಜ್ ಎಂದು ಕರೆಯುತ್ತಾರೆ. 

	ಜೀವನ ಚಕ್ರ : ತುಕ್ಕು  ರೋಗಕಾರಕ ಶಿಲೀಂಧ್ರಗಳ ಜೀವನ ತೊಡಕಿನ ರೀತಿಯದು. ಅನೇಕ ಪ್ರಭೇದಗಳಲ್ಲಿ ವಿವಿಧ ರೀತಿಯ ಬೀಜಕಗಳು ಅನುಕ್ರಮ ರೀತಿಯಲ್ಲಿ ಉತ್ಪತ್ತಿಯಾಗುತ್ತವೆ.

	ತುಕ್ಕು ರೋಗಕಾರಕ ಶಿಲೀಂಧ್ರದ ಜೀವನ ಚಕ್ರ ನಾಲ್ಕೈದು ಹಂತಗಳಲ್ಲಿ ನಡೆಯುತ್ತದೆ. ಸ್ಥೂಲವಾಗಿ  ಜೀವನ ಚಕ್ರದಲ್ಲಿ ಎರಡು ವಿಧಗಳನ್ನು ಗುರುತಿಸಬಹುದು. (1) ದೀರ್ಘ ಜೀವನ ಚಕ್ರದ ರೋಗದ ಶಿಲೀಂಧ್ರಗಳು (ಮ್ಯಾಕ್ರೋಸೈಕ್ಲಿಕ್ ರಸ್ಟ್ಸ್), (2) ಕಿರುಜೀವನಚಕ್ರದ ತುಕ್ಕು ರೋಗಕಾರಕ ಶಿಲೀಂಧ್ರಗಳು (ಮೈಕ್ರೋಸೈಕ್ಲಿಕ್ ರಸ್ಟ್ಸ್).

	ತುಕ್ಕು ರೋಗದ ಶಿಲೀಂಧ್ರ ಟೆಲ್ಯುಟೋಸ್ಪೋರ್ ಮತ್ತು ಸ್ಪೊರಿಡಿಯಮುಗಳಲ್ಲದೆ ಎರಡು ನ್ಯೂಕ್ಲಿಯಸ್ ಇರುವ ಬೇರೆ ರೀತಿಯ ಬೀಜಕಗಳನ್ನು ಉತ್ಪತ್ತಿ ಮಾಡಿದರೆ ಅಂಥವಕ್ಕೆ ದೀರ್ಘ ಜೀವನಚಕ್ರದವುಗಳೆಂದು ಹೆಸರು. ಉದಾಹರಣೆಗೆ ಗೋದಿಯ ಮೇಲೆ ಬೆಳೆಯುವ ಪಕ್ಸೀನಿಯ ಗ್ರ್ಯಾಮಿನಿಸ್.

	ಟೆಲ್ಯುಟೋಸ್ಪೋರ್ ಅಲ್ಲದೆ ಬೇರೆ ಎರಡು ನ್ಯೂಕ್ಲಿಯಸ್‍ಗಳಿರುವ ಬೀಜಕಗಳನ್ನು ಉತ್ಪತ್ತಿ ಮಾಡದೆ ಇರುವ ಶಿಲೀಂಧÀ್ರಗಳಿಗೆ ಕಿರು ಜೀವನಚಕ್ರದವುಗಳೆಂದು ಹೆಸರು: ಉದಾ : ಹಾಲಿಹಾಕ್ ಸಸ್ಯದ ಮೇಲೆ ಬೆಳೆಯುವ ಪಕ್ಸೀನಿಯ ಮ್ಯಾಲ್‍ವೇಸಿಯಾರಮ್.

	ದೀರ್ಘ ಜೀವನಚಕ್ರವುಳ್ಳ ಶಿಲೀಂಧÀ್ರಗಲ್ಲಿ ಐದು ಹಂತಗಳನ್ನು ಗುರುತಿಸಬಹುದು:
		ಹಂತ  0  ಸ್ಪರ್ಮಗೋನಿಯ: (ಸ್ಪರ್ಮೇಷಿಯ ಮತ್ತು ರಿಸೆಪ್ಟಿವ್ ಹೈಫ ಪಡೆದಂಥವು)
		ಹಂತ  I  ಈಸಿಯೋಸ್ಪೋರುಗಳನ್ನು ಹೊಂದಿರುವ ಈಸಿಯ
		ಹಂತ  II  ಯುರೆಡೋಸ್ಪೋರ್ ಹೊಂದಿರುವ ಯುರೆಡಿಯ 
		ಹಂತ  III  ಟೆಲ್ಯುಟೋಸ್ಪೋರ್ ಹೊಂದಿರುವ ಟೀಲಿಯ
		
ಹಂತ  Iv  ಬೆಸಿಡಿಯೋಸ್ಪೋರ್ ಹೊಂದಿರುವ ಪ್ರೊಮೈಸೀಲಿಯಮ್‍ಗಳು
ಭಿನ್ನಾಶ್ರಯಿ (ಹೆಟರೀಷಸ್) ಮತ್ತು ಏಕಾಶ್ರಯಿ (ಆಟೀಷಸ್) ತುಕ್ಕು ರೋಗಕಾರಕ ಶಿಲೀಂಧ್ರಗಳು : ತುಕ್ಕುರೋಗಕಾರಕ ಶಿಲೀಂಧ್ರಗಳು ಇತರೆ ಸಸ್ಯಗಳ ಮೇಲೆ ಪರಾವಲಂಬಿಗಳಾಗಿ ಜೀವಿಸುತ್ತವೆ ಎಂದು ಮೇಲೆಯೇ ಹೇಳಿದೆ. ಈ ಪರಾವಲಂಬಿ ಜೀವನದಲ್ಲಿ ಇವು ಹೆಚ್ಚಿನ ವಿಶೇಷತೆಯನ್ನು (ಸ್ಪೆಷಲೈಸೇಷನ್) ಪ್ರದರ್ಶಿಸುವುವು. ಕೆಲವು ಒಂದೇ ಆತಿಥೇಯ ಸಸ್ಯದ ಮೇಲೂ ಕೆಲವು ಅನೇಕ ಆತಿಥೇಯ ಸಸ್ಯಗಳ ಮೇಲೂ ಬೆಳೆಯುತ್ತವೆ.

	ಜೀವನಚಕ್ರವನ್ನು ಪೂರ್ತಿಗೊಳಿಸಲು ಎರಡು ಆತಿಥೇಯ ಸಸ್ಯಗಳ ಅಗತ್ಯವಿರುವ ತುಕ್ಕು ರೋಗಕಾರಕ ಶಿಲೀಂಧ್ರಗಳಿಗೆ ಭಿನ್ನಾಶ್ರಯಿಗಳು ಎಂದು ಹೆಸರು. ಇಂಥವು ಜೀವನ ಚಕ್ರದ ಹಂತ 0 ಮತ್ತು 1ನ್ನು ಒಂದು ಆತಿಥೇಯ ಸಸ್ಯದ ಮೇಲೂ  2, 3, ಮತ್ತು 4ನ್ನು ಇನ್ನೊಂದರ ಮೇಲೂ ಪೂರ್ಣಗೊಳಿಸುತ್ತವೆ. ಟೀಲಿಯಲ್ ಹಂತ ಯಾವ ಆತಿಥೇಯ ಸಸ್ಯದಲ್ಲಿ ನಡೆಯುತ್ತದೋ ಅಂಥವನ್ನು ಪ್ರೈಮರಿ (ಮೊದಲ) ಆತಿಥೇಯ ಸಸ್ಯವೆಂದೂ ಉಳಿದ ಹಂತಗಳು ನಡೆಯುವ ಆತಿಥೇಯವನ್ನು ಪರ್ಯಾಯ (ಆಲ್ಟರ್ನೇಟ್) ಆತಿಥೇಯ ಸಸ್ಯವೆಂದೂ ಕರೆಯಲಾಗುತ್ತದೆ. ಇವು ಜೀವನಚಕ್ರವನ್ನು ಪೂರೈಸಲು ಆಶ್ರಯಿಸುವ ಮೊದಲ ಮತ್ತು ಪರ್ಯಾಯ ಸಸ್ಯಗಳು ಒಂದಕ್ಕೊಂದು ಸಂಬಂಧಿಸದ ಅಂದರೆ ಬೇರೆ ಬೇರೆ ವರ್ಗಕ್ಕೆ ಸೇರಿದವುಗಳಾಗಿರಬಹುದು. ಅಂದರೆ ಕೆಲವು ಏಕದಳ ಸಸ್ಯ ವರ್ಗಕ್ಕೂ ಕೆಲವು ದ್ವಿದಳ ಜಾತಿಯ ಸಸ್ಯ ವರ್ಗಕ್ಕೂ ಸೇರಿದಂಥÀÀವಾಗಿರಬಹುದು. ಉದಾಹರಣೆಗೆ ಪಕ್ಸೀನಿಯ ಗ್ರ್ಯಾಮಿನಿಸ್ ಎಂಬ ಶಿಲೀಂಧ್ರ ಏಕದಳವರ್ಗಕ್ಕೆ ಸೇರಿದ ಗೋದಿಯ ಮೇಲೆ ಜೀವನಚಕ್ರದ ಕೆಲವು ಹಂತಗಳನ್ನೂ ಉಳಿದ ಹಂತಗಳನ್ನು ದ್ವಿದಳಜಾತಿಯ ಸಸ್ಯವರ್ಗಕ್ಕೆ ಸೇರಿದ ಬಾರ್ಬೆರಿಯ ಮೇಲೂ ಸಾಗಿಸುತ್ತದೆ.

	ಏಕಾಶ್ರಯಿ ಬಗೆಯ ತುಕ್ಕುರೋಗಕಾರಕ ಶಿಲೀಂಧ್ರಗಳಲ್ಲಿ ಜೀವನಚಕ್ರ ಪೂರ್ತಿ ಒಂದು ಆತಿಥೇಯ ಸಸ್ಯದ ಮೇಲೆ ನಡೆಯುತ್ತದೆ. ಉದಾಹರಣೆಗೆ ಶತಾವರಿ ಗಿಡದ ಮೇಲೆ ಬೆಳೆಯುವ ಪಕ್ಸೀನಿಯ ಆಸ್ಪರಜೈ.

	ತುಕ್ಕುರೋಗದ ಜೀವನಚಕ್ರದ ಹಂತಗಳ ರಚನೆಗಳು ಈ ರೀತಿ ಇರುತ್ತವೆ. ಹಂತ 0- ಸ್ಪರ್ಮಗೋನಿಂiÀi : ಸ್ಪರ್ಮಗೋನಿಂiÀi ಲೈಂಗಿಕಾಂಗಗಳನ್ನು ಹೊಂದಿರುವ ರಚನೆ. ಇದರಲ್ಲಿ ಸ್ಪರ್ಮೇಷಿಯ ಪುರುಷ ಅಂಗಾಂಶವನ್ನು ಮತ್ತು ರಿಸೆಪ್ಟಿವ್ ಹೈಫವು ಸ್ತ್ರೀ ಅಂಗಾಂಶವನ್ನು ಪ್ರತಿನಿಧಿಸುವುವು. ಸ್ಪರ್ಮಗೋನಿಂiÀi ಒಂದೇ ನ್ಯೂಕ್ಲಿಯಸ್ ಇರುವ ಪ್ರಾಥಮಿಕ ಮೈಸೀಲಿಯಮಿನಿಂದ ಆತಿಥೇಯ ಸಸ್ಯದ ಜೀವಕೋಶಗಳ ನಡುವೆ ರೂಪುಗೊಳ್ಳುತ್ತದೆ. ಸ್ಪರ್ಮಗೋನಿಂiÀi ವಿವಿಧ ಆಕಾರದ್ದಾಗಿರಬಹುದು. ಕೆಲವಕ್ಕೆ ಗುದ್ದಲಿ ಆಕಾರ, ಕೆಲವಕ್ಕೆ ಗೋಳಾಕಾರ ಇದ್ದರೆ ಕೆಲವು ಚಾಚಿಕೊಂಡು ಚಪ್ಪಟೆಯಾಗಿ ಇರುತ್ತವೆ. ಬೆಸಿಡಿಯೋಸ್ಪೋರ್ ಆತಿಥೇಯ ಸಸ್ಯಕ್ಕೆ ತಾಕಿ, ಅಲ್ಲಿ ಮೊಳೆತು ಪ್ರಾಥಮಿಕ ಮೈಸೀಲಿಯಮನ್ನು ಉತ್ಪಾದಿಸಿ ಸ್ಪರ್ಮಗೋನಿಂiÀiದ ಬೆಳೆವಣಿಗೆಯನ್ನು ಪ್ರಾರಂಭಿಸುತ್ತದೆ. ಈ ಮೈಸೀಲಿಯಮ್ ಸಮೂಹದಿಂದ ಕೊಂಬೆಗಳಂಥÀ ಅನೇಕ ರಚನೆಗಳು ಹೊರಟು ಎಲ್ಲವೂ ಒಂದು ಕಡೆ ಸೇರುತ್ತವೆ. ಅನಂತರ ಸ್ಪರ್ಮಗೋನಿಂiÀiದ ಗೋಡೆ ರಚಿತವಾಗಿ ಅದರ ಮಧ್ಯೆ ಒಂದು ಪೊಳ್ಳು ಉಂಟಾಗುತ್ತದೆ. ಸ್ಪರ್ಮಗೋನಿಂiÀiದ ಗೋಡೆಯು ಒಳಭಾಗದಿಂದ ಪೊಳ್ಳುಭಾಗಕ್ಕೆ ಉದ್ದನೆಯ ಒಂದೇ ನ್ಯೂಕ್ಲಿಯಸ್ ಉಳ್ಳ ಸ್ಪರ್ಮೇಷಿಯೋಪೋರ್ಸ್ ಎಂಬ ರಚನೆಗಳನ್ನು ಕಳುಹಿಸುತ್ತದೆ. ಇದರ ತುದಿಯಿಂದ ಒಂದೇ ನ್ಯೂಕ್ಲಿಯಸ್ ಇರುವ ಸ್ಪರ್ಮೇಷಿಯ ಎಂಬ ರಚನೆಗಳು ಉಂಟಾಗುತ್ತವೆ. ಗುದ್ದಲಿಯಾಕಾರದ ಈ ಸ್ಪರ್ಮಗೋನಿಂiÀiದ ಮೇಲ್ಭಾಗದಲ್ಲಿ ಅಸ್ಟಿಯೋಲ್ ಎಂಬ ಒಂದು ದ್ರವ ಏರ್ಪಡುತ್ತದೆ. ಸ್ಪರ್ಮೇಷಿಯೊಪೋರ್‍ಗಳಿಂದ ಬಿಡುಗಡೆಯಾದ  ಸ್ಪರ್ಮೇಷಿಯಗಳು ಸ್ಪರ್ಮಗೋನಿಂiÀiದ ಮಧ್ಯಭಾಗಕ್ಕೆ ಬಂದು ಸೇರಿ ಅಲ್ಲಿಂದ ಒಂದು ಅಂಟು ಸಿಹಿ ದ್ರವದೊಂದಿಗೆ ಕೂಡಿಕೊಂಡು ಆಸ್ಟಿಯೋಲ್ ರಂಧ್ರ್ರದ ಮೂಲಕ ಹೊರಬರುತ್ತವೆ.

	ರಿಸೆಪ್ಟಿವ್ ಹೈಫಗಳು ಸ್ತ್ರೀ ಜನನಾಂಗಗಳು. ಇವು  ಸ್ಪರ್ಮಗೋನಿಂiÀiದ ಮೇಲ್ಭಾಗದ ಗೋಡೆಗಳಿಂದ ಹೊರಟು ಅಂಟು ದ್ರವದೊಂದಿಗೆ ಆಸ್ಟಿಯೋಲ್ ಮೂಲಕ ಹೊರಬರುತ್ತವೆ. ರಿಸೆಪ್ಟಿವ್ ಹೈಫಗಳು ಉರುಳೆಯಾಕಾರದವು. ಇವುಗಳ ತುದಿ ಮೊಂಡಾಗಿರುತ್ತದೆ. ಒಂದೇ ಸ್ಪರ್ಮಗೋನಿಂiÀiದಲ್ಲಿ ಉತ್ಪತ್ತಿಯದ ರಿಸೆಪ್ಟಿವ್ ಹೈಫ ಮತ್ತು ಸ್ಪರ್ಮೇಷಿಯಗಗಳ ನಡುವೆ ಅನುಬದ್ಧ ಸಂಯೋಗ (ಕಾಂಜುಗೇಷನ್) ನಡೆಯುವುದಿಲ್ಲ. 

	ಹಂತ 1 : ಈಸಿಯ ಮತ್ತು ಈಸಿಯೋಸ್ಪೋರ್‍ಗಳು : ಈಸಿಯ ಮತ್ತು ಈಸಿಯೋಸ್ಪೋರ್‍ಗಳು ಜೀವನಚಕ್ರದ ಎರಡನೆಯ ಹಂತವನ್ನು ಪ್ರತಿನಿಧಿಸುತ್ತವೆ. ಎರಡು ನ್ಯೂಕ್ಲಿಯಸ್‍ಗಳಿರುವ ಮೈಸೀಲಿಯಮುಗಳಿಂದ ಈಸಿಯ ಮತ್ತು ಈಸಿಯೋಸ್ಪೋರುಗಳ ಉತ್ಪತ್ತಿ ಪ್ರಾರಂಭವಾಗುತ್ತದೆ. ಈಸಿಯಮಿನ ರಚನೆ ಈ ಮೈಸೀಲಿಯಮುಗಳಿಂದ ಪೂರ್ಣಗೊಂಡು ಅದರ ತಳದಲ್ಲಿರುವ ಪದರಗಳಿಂದ ಈಸಿಯೋಸ್ಪೋರ್‍ಗಳು ಉತ್ಪತ್ತಿಯಾಗುತ್ತವೆ.

	ಈಸಿಯಮಿನ ತಳಭಾಗದ ಜೀವಕೋಶಗಳಿಗೆ ಈಸಿಯೋಸ್ಪೋರ್ ಮಾತೃಕೋಶಗಳು ಎಂದು ಹೆಸರು. ಒಂದೇ ನ್ಯೂಕ್ಲಿಯಸ್ ಇರುವ ಮೈಸೀಲಿಯಮಿನಿಂದ ಈಸಿಯಲ್ ಪ್ರಾರಂಭಿಕ ಎಳೆಗಳು ಉಂಟಾಗಿ ಅನಂತರ ಎರಡು ನ್ಯೂಕ್ಲಿಯಸ್ ಇರುವ ರಚನೆಗಳು ಪುಂಚರಣಿಕ್ರಿಯೆಯಿಂದ (ಸ್ಪರ್ಮುಟೈಸೇಷನ್) ಉಂಟಾಗುತ್ತವೆಂದು ನಂಬಲಾಗಿದೆ. 

	ಈಸಿಯೋಸ್ಪೋರ್ ಮಾತೃಕೋಶಗಳಿಂದ ವಿಭಜನೆಹೊಂದಿದ ಜೀವಕೋಶಗಳು ವಿಯೋಜಕ ಜೀವಕೋಶಗಳು (ಡಿಸ್‍ಜಂಕ್ಟರ್ ಸೆಲ್ಸ್) ಮತ್ತು ಈಸಿಯೋಸ್ಪೋರ್‍ಗಳು ಒಂದುಗೂಡಿದ ನಂತರ ಒಂದು ಸರಪಣಿಯ ರೂಪದಲ್ಲಿ ಉತ್ಪತ್ತಿಯಾಗುತ್ತವೆ. ಈಸಿಯಮಿನ ತಳಭಾಗದಲ್ಲಿರುವ ಜೀವಕೋಶಗಳು ಅನೇಕ ವಿಭಜನೆಗಳ ಫಲವಾಗಿ  ಈಸಿಯೋಸ್ಪೋರುಗಳನ್ನು ಆವರಿಸುವ ಬಟ್ಟಲಿನಾಕಾರವನ್ನು ತಳೆಯುತ್ತವೆ. ಇದರ ಸುತ್ತ ತೆಳ್ಳನೆಯ ಪೊರೆ ಉಂಟು. ಇದಕ್ಕೆ ಪೆರಿಡಿಯಮ್ ಎಂದು ಹೆಸರು. ಈಸಿಯಮ್ ಪೂರ್ಣವಾಗಿ ಬೆಳೆದಾಗ ಅದರ ಸ್ಪೋರ್‍ಗಳ ಒತ್ತಡದಿಂದ ಪೆರಿಡಿಯ ಭಾಗ ಬಿರಿದೊಡೆದು ಬೀಜಕಗಳು ಬಿಡುಗಡೆಯಾಗುತ್ತವೆ. ಈಸಿಯಮ್ ಪೂರ್ಣವಾಗಿ ಬೆಳೆದ ಬಳಿಕ ವಿಯೋಜಕ ಬೀಜಕೋಶಗಳು ನಶಿಸಿ ಹೋಗಿ ಈಸಿಯೋಸ್ಪೋರುಗಳು ಬಿಡುಗಡೆಯಾಗುವುವು. ಈಸಿಯಮುಗಳು ಸಾಮಾನ್ಯವಾಗಿ ಎಲೆಯ ತಳಭಾಗದಲ್ಲಿ ಉತ್ಪತ್ತಿಯಾಗುತ್ತವೆ. 

	ಹಂತ 2 ಯುರೆಡಿಯ ಮತ್ತು ಯುರೆಡೋಸ್ಪೋರುಗಳು ; ಯುರೆಡೋಸ್ಪೋರುಗಳು ಯುರೆಡಿಯ ಎಂಬ ಅಂಗದಲ್ಲಿ ಉತ್ಪತ್ತಿಯಾಗುತ್ತವೆ. ಈಸಿಯೋಸ್ಪೋರುಗಳು ಮೊಳೆತು ಉತ್ಪಾದಿಸುವ ಎರಡು ನೂಕ್ಲಿಯಸ್ ಉಳ್ಳ ಮೈಸೀಲಿಯಮಿನಿಂದ ಯುರೆಡಿಯ ಉಂಟಾಗುವುದು. ಯುರೆಡಿಯವು ಆತಿಥೇಯ ಸಸ್ಯದ ಎಪಿಡರ್ಮಿಸ್ ಪದರದ ತಳಭಾಗದಲ್ಲಿ ಮೂಡುತ್ತದೆ. ಯುರೆಡೋಸ್ಪೋರುಗಳು ಗೋಳಾಕಾರ ಅಥವಾ ಅಂಡಾಕಾರವಾಗಿರುವುವು. ಇವಕ್ಕೆ ಉದ್ದನೆಯ ತೊಟ್ಟು ಉಂಟು. ಇವುಗಳಿಗೆ ಮುಳ್ಳುಗಳಂಥ ರಚನೆಯಿಂದ ಕೂಡಿದ ದಪ್ಪವಾದ ಹೊರಕವಚವೂ ಇರುತ್ತದೆ. ಈ ಬೀಜಕಗಳಲ್ಲಿ ಕೆಂಪು ವರ್ಣಕ (ಪಿಗ್ಮೆಂಟ್) ಇದೆಯಾಗಿ ಯುರೆಡಿಯ ಇರುವ ಇಡೀ ಪ್ರದೇಶ ತುಕ್ಕು ಬಣ್ಣವನ್ನು ತಳೆಯತ್ತದೆ. ಹೆಚ್ಚು ಪ್ರಮಾಣದಲ್ಲಿ ಯುರೆಡೋಸ್ಪೋರುಗಳು ಉತ್ಪತ್ತಿಯಾಗುವುದರಿಂದ ಆತಿಥೇಯ ಸಸ್ಯದ ಎಪಿಡರ್ಮಿಸ್ ಪದರಕ್ಕೆ ಒಳಭಾಗಕ್ಕೆ ಒತ್ತಡ ಬೀಳುತ್ತದೆ. ಇದರಿಂದ ಯುರೇಡಿಯ ಬಿರಿದೊಡೆದು ಒಳಗಿನ ಬೀಜಕಗಳು ಬಿಡುಗಡೆಯಾಗುತ್ತವೆ.

ತುಕ್ಕುರೋಗದ ತೀವ್ರ ಹರಡುವಿಕೆಗೆ ಯುರೆಡೋಸ್ಪೋರುಗಳೇ ಕಾರಣ. ಇವು ಎರಡು ಶ್ರಾಯಗಳಲ್ಲಿ ಉತ್ಪತ್ತಿಯಾಗುವುದರಿಂದ ರೋಗವು ಸಸ್ಯದಿಂದ ಸಸ್ಯಕ್ಕೂ ಒಂದು ಜಮೀನಿನಿಂದ ಮತ್ತೊಂದು ಜಮೀನಿಗೂ ಹರಡುವುದಕ್ಕೆ ಅನುಕೂಲವಾಗುತ್ತದೆ. ಒಂದು ಸಸ್ಯದಲ್ಲಿ ಉತ್ಪತ್ತಿಯಾದ ಯುರೆಡೋಸ್ಪೋರುಗಳು ಇನ್ನೊಂದು ಸಸ್ಯದ ಮೇಲೆ ಬಿದ್ದು ಅಲ್ಲಿ ಕೆಲವೇ ದಿನಗಳಲ್ಲಿ ಮೊಳೆತು ಮತ್ತೆ ಯುರೆಡಿಯಗಳನ್ನುಂಟುಮಾಡಿ ಅದರಿಂದ ಪುನಃ ಕೋಟ್ಯನುಕೋಟಿ ಯುರೆಡೋಸ್ಪೋರುಗಳನ್ನು ಉತ್ಪಾದಿಸುತ್ತದೆ.
ಹಂತ 3 : ಟೀಲಿಯ ಮತ್ತು ಟೆಲ್ಯುಟೋಸ್ಪೋರುಗಳು : ಆತಿಥೇಯ ಸಸ್ಯದೊಳಗಿರುವ ಟೀಲಿಯ ಎಂಬ ರಚನೆಗಳನ್ನು ಉತ್ಪಾದಿಸುವುವು. ಯುರೆಡಿಯಗಳಿಂದ ಸಹ ಟೆಲ್ಯುಟೋಸ್ಪೋರುಗಳು ಉತ್ಪತ್ತಿಯಾಗುಬಹುದು. ಟೆಲ್ಯುಟೋಸ್ಪೋರುಗಳು ಎರಡು ಜೀವಕೋಶಗಳುಳ್ಳ ಬೀಜಕಗಳು. ಇವುಗಳ ಆಕಾರದಲ್ಲಿ ವ್ಯತ್ಯಾಸವಿರುವುದುಂಟು. ಆಕಾರ ಮತ್ತು ಗಾತ್ರಗಳ ಆಧಾರದ ಮೇಲೆ ಯುರಡಿನೇಲೀಸ್ ಗಣವನ್ನು ಅನೇಕ ಕುಟುಂಬ ಜಾತಿ ಮತ್ತು ಪ್ರಭೇದಗಳಾಗಿ ವಿಂಗಡಿಸಲಾಗಿದೆ. ಟೆಲ್ಯುಟೋಸ್ಪೋರುಗಳಿಗೆ ತೊಟ್ಟು ಇರಬಹುದು ಅಥವಾ ಇಲ್ಲದಿರಬಹುದು. ಅವು ಬಿಡಿಬಿಡಿಯಗಿರಬಹುದು ಅಥವಾ ಒಂದಕ್ಕೊಂದು ಅಂಟಿಕೊಂಡಿರಬಹುದು. ಒಟ್ಟಿಗೆ ಗುಂಪಾಗಿರಬಹುದು ಅಥವಾ ಒಂದರ ಹಿಂದೆ ಒಂದು ಸೇರಿಕೊಂಡಂತೆ ಇರಬಹುದು. ಒಂದಕ್ಕಿಂತ ಹೆಚ್ಚು ಜೀವಕೋಶಗಳುಳ್ಳ ಟೆಲ್ಯುಟೋಸ್ಪೋರಿನಲ್ಲಿ ಪ್ರತಿ ಜೀವಕೋಶವೂ ಮೊಳೆತು ಪ್ರೋಮೈಸೀಲಿಯಮ್ ಎಂಬ ರಚನೆಯನ್ನುಂಟುಮಾಡುತ್ತವೆ. ಕೆಲವು ಬೀಜಕಗಳು ಬಣ್ಣರಹಿತವಾಗಿದ್ದರೆ ಇನ್ನು ಕೆಲವು ಕಂದು ಕೆಂಪು ಬಣ್ಣದ್ದಾಗಿರುವುವು. ಇವುಗಳ ಹೊರಕವಚ ಮುಳ್ಳಿನಂಥ ರಚನೆಗಳಿಂದ ಕೂಡಿರುವುದೂ ಉಂಟು.

ತುಕ್ಕುರೋಗದಲ್ಲಿ ಲಿಂಗರೀತ್ಯಾ ಅನುಬದ್ಧ ಸಂಯೋಗ : ತುಕ್ಕು ರೋಗದ ಶಿಲೀಂಧ್ರಗಳ ಮೈಸೀಲಿಯಮ್‍ಗಳು ಸ್ವತಃ ಬರಡು ರೀತಿಯವು. ಆದರೆ ಅವುಗಳ ಧನಾತ್ಮಕ (+) ಮತ್ತು ಋಣಾತ್ಮಕ (-) ಹೈಫೆಗಳಲ್ಲಿ ನಡೆಯುವ ಅನುಬದ್ಧ ಸಂಯೋಗದಿಂದಾಗಿ ಅವು ಫಲಬಿಡುವಂತಾಗುತ್ತವೆ. ಕ್ಯಾರಿಯೋಗಮಿ ನಡೆದು ಧನಾತ್ಮಕ ಮತ್ತು ಋಣಾತ್ಮಕ ಮೈಸೀಲಿಯಮ್‍ಗಳು ಸೇರಿ ಅನಂತರ ಪ್ರೋಮೈಸೀಲಿಯಮ್ ರಚಿತವಾಗಿ ಅದರಿಂದ ಉತ್ಪತ್ತಿಯಾಗುವ ಬೆಸಿಡಿಯೋಸ್ಪೋರುಗಳಲ್ಲಿ ಎರಡು ಧನಾತ್ಮಕ (+) ಮತ್ತು ಎರಡು (-) ಋಣಾತ್ಮಕ ತಳಿಗಳು (ಸ್ಪ್ರೇನ್) ಉದ್ಭವಿಸುವುವು.
ವರ್ಗೀಕರಣ : ಯುರಡೆನೇಲೀಸ್ ಗಣವನ್ನು ಟೆಲ್ಯುಟೋಸ್ಪೋರುಗಳ ಗುಣ ಲಕ್ಷಣ ಮತ್ತು ನಡವಳಿಕೆ ಮೇರೆಗೆ ಮೂರು ಕುಟುಂಬಗಳನ್ನಾಗಿ ವಿಂಗಡಿಸಲಾಗಿದೆ: 1 ಪಕ್ಸೀನಿಯೇಸೀ 2 ಮೆಲಾಂಪ್ಸೊರೇಸೀ 3 ಕೋಲಿಯೋಸ್ಪೊರೇಸೀ. 
 ತುಕ್ಕುರೋಗಗಳಲ್ಲೆಲ್ಲ ಅತ್ಯಂತ ಮುಖ್ಯವಾದದ್ದು ಗೋದಿಬೆಳೆಗೆ ಬರುವ ತುಕ್ಕುರೋಗ. ಇದು ಪಕ್ಸೀನಿಯೇಸೀ ಕುಟುಂಬಕ್ಕೆ ಸೇರಿದ ಪಕ್ಸೀನಿಯ ಗ್ರ್ಯಾಮಿನಿಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಪಕ್ಸೀನಿಯ ಜಾತಿಯಲ್ಲಿ ಸುಮಾರು 700ಕ್ಕೂ ಹೆಚ್ಚು ಪ್ರಭೇದಗಳಿವೆ. ಪಕ್ಸೀನಿಯ ಎಂಬ ಹೆಸರನ್ನು ಟಿ. ಪಕ್ಸಿನಿ ಎಂಬ ಇಟಾಲಿಯನ್ ವಿಜ್ಞಾನಿಯ ಜ್ಞಾಪಕಾರ್ಥವಾಗಿ ಕೊಡಲಾಗಿದೆ. 
ಗೋದಿಗೆ ಮೂರು ತೆರನ ತುಕ್ಕುರೋಗ ಬರುತ್ತದೆ. : 1 ಪಕ್ಸೀನಿಯ ಗ್ರ್ಯಾಮಿನಿಸ್ ಎಂಬುದರಿಂದ ಕಪ್ಪು ತುಕ್ಕುರೋಗ ಅಥವಾ ಕಾಂಡ ತುಕ್ಕುರೋಗ. 2 ಪಕ್ಸೀನಿಯ ಗ್ಲುಮೇರಮ್ ಎಂಬುದರಿಂದ ಹಳದಿ ಅಥವಾ ಪಟ್ಟೆ ತುಕ್ಕುರೋಗ. 3 ಪಕ್ಸೀನಿಯ ಟ್ರಿಟಿಸಿನ ಎಂಬುದರಿಂದ ಕಂದು ಅಥವಾ ಕಿತ್ತಳೆ ಬಣ್ಣದ ತುಕ್ಕುರೋಗ.
ಪಕ್ಸೀನಿಯ ಗ್ರ್ಯಾಮಿನಿಸ್. (ಕಪ್ಪು ತುಕ್ಕುರೋಗ ಅಥವಾ ಕಾಂಡ ತುಕ್ಕುರೋಗ): ಇದು ಗೋದಿ ಗಿಡದ ಕಾಂಡ ಮತ್ತು ಎಲೆಗಳಿಗೆ ತಗುಲುತ್ತದೆ. ಈ ರೋಗದಿಂದ ಕೋಟ್ಯಂತರ ರೂಪಾಯಿಗಳ ಬೆಳೆ ನಷ್ಟವಾಗುವುದುಂಟು. ಈ ತುಕ್ಕುರೋಗ ಅನೇಕ ವಿಧದ ಬೀಜಕಗಳಿಂದ ಕೂಡಿದ್ದು ದೀರ್ಘಚಕ್ರವುಳ್ಳದ್ದಾಗಿದೆ. ಇದು ಭಿನ್ನಾಶ್ರಯೀ ತುಕ್ಕುರೋಗವಾದ್ದರಿಂದ ಎರಡು ಆತಿಥೇಯ ಸಸ್ಯಗಳ ಮೇಲೆ ಇದರ ಜೀವನ ಚಕ್ರ ಪೂರ್ಣಗೊಳ್ಳುತ್ತದೆ. ಇದರ ಡಿಪ್ಲೋಫೇಸ್ (2ಟಿ) ಹಂತ ಗೋದಿ ಸಸ್ಯದ ಮೇಲೂ ಹ್ಯಾಪ್ಲೊಪೇಸ್ (1ಟಿ) ಹಂತ ಪರ್ಯಾಯ ಬಾರ್ಬೆರಿಯ ಮೇಲೂ ನಡೆಯತ್ತದೆ.

	ರೋಗದ  ಚಿಹ್ನೆಗಳು : ಮೊದಲು ಕಾಂಡ ಮತ್ತು ಎಲೆಗಳ ಮೇಲೆ ಕೆಂಪು ಬಣ್ಣದ ಮಚ್ಚೆಗಳು ಮೂಡುತ್ತವೆ. ಈ ಮಚ್ಚೆಗಳು ಪೂರ್ಣವಾಗಿ ಬಲಿತಾಗ ಎಲೆಯ ಮೇಲೆ ಕಂದು ಕೆಂಪು ಬಣ್ಣದ ಪುಡಿಯಂತಿರುವ ಯುರೆಡೋಸ್ಪೋರುಗಳು ಕಾಣತೊಡಗುವುವು. ಸೂಕ್ಷ್ಮದರ್ಶಕದ ಸಹಾಯದಿಂದ ನೋಡಿದರೆ ಮಚ್ಚೆಗಳು ಅಧಿಕ ಸಂಖ್ಯೆಯ ಯುರೆಡೋಸ್ಪೋರ್‍ಗಳಿಂದ ತುಂಬಿರುವುದನ್ನು ನೋಡಬಹುದು. ಕ್ರಮೇಣ ತೆನೆಭಾಗದಲ್ಲೂ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಿಂದಾಗಿ ಎಲೆಗಳಲ್ಲಿ ಹಸಿರು ಬಣ್ಣ ಕಡಿಮೆಯಾಗುತ್ತ ಬಂದು ಅವು ಹಳದಿ ಬಣ್ಣಕ್ಕೆ ತಿರುಗುವುವು. ಎಲೆಗಳು ಒಣಗಲು ಪ್ರಾರಂಭಿಸುತ್ತವೆ. ರೋಗ ತೀವ್ರಗೊಂಡಾಗ ಎಲ್ಲ ಎಲೆಗಳಿಗೂ ರೋಗ ತಗುಲಿ ತೆನೆಗಳೇ ರೂಪುಗೊಳ್ಳದೆ ಸಸ್ಯ ಸತ್ತುಹೋಗುತ್ತದೆ.

	ಪಕ್ಸೀನಿಯ ಗ್ರ್ಯಾಮಿನಿಸ್ ಶಿಲೀಂಧ್ರದ ಜೀವನ ಚಕ್ರದ ಐದು ಹಂತಗಳನ್ನು ವಿವರಿಸಲಾಗಿದೆ:

	ಯುರೆಡಿನಲ್ ಹಂತ : ಗೋದಿ ಸಸ್ಯದ ಎಲೆ, ಕಾಂಡಗಳ ಮೇಲೆ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇವಕ್ಕೆ ಪಸ್ಟೂಲ್‍ಗಳೆಂದು ಹೆಸರು. ಇವು ವಿಶೇಷವಾಗಿ ಕಾಣಿಸಿಕೊಳ್ಳುವುದು ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ.  ಪಸ್ಟೂಲ್‍ಗಳಿಗೆ ವ್ಶೆಜ್ಞಾನಿಕವಾಗಿ ಯುರೆಡಿಯಮ್ ಅಥವಾ ಯುರೆಡೋಸ್ಪೋರಸ್‍ಗಳೆಂದು ಹೆಸರು. ಆತಿಥೇಯ ಸಸ್ಯದ ಎಪಿಡರ್ಮಿಸ್ ಪದರದ ತಳ ಭಾಗದಲ್ಲಿರುವ ಶಿಲೀಂಧ್ರದ ಮೈಸೀಲಿಯಮ್‍ಗಳು ಆತಿಥೇಯ ಜೀವಕೋಶಗಳ ನಡುವೆ ಇರುವ ಭಾಗಗಳ ಮಧ್ಯೆ ಹರಡಿಕೊಂಡು ಬೆಳೆಯುತ್ತವೆ. ಈ ಮೈಸೀಲಿಯಮ್‍ಗಳು ಹಾಸ್ಪೋರಿಯ ಅಥವಾ ಸಕರ್ ಎಂಬ ರಚನೆಗಳನ್ನು ಆತಿಥೇಯ ಸಸ್ಯದ ಜೀವಕೋಶಗಳೊಳಕ್ಕೆ ಕಳುಹಿಸಿ ತಮಗೆ ಬೇಕಾದ ಆಹಾರಂಶವನ್ನು ಪಡೆಯತ್ತವೆ. ಈ ಮೈಸೀಲಿಯಮ್ ಎರಡು ನ್ಯೂಕ್ಲಿಯಸ್‍ಗಳನ್ನು ಹೊಂದಿರುತ್ತದೆ. ಯುರೆಡಿಯಮಿನ ಸ್ಪೋರೊಫೋರ್ಸ್ ಎಂಬ ಹೈಫಗಳ ತುದಿಯಿಂದ ಯುರೆಡೋಸ್ಟೋರುಗಳು ಉತ್ಪತ್ತಿಯಾಗುವುದರಿಂದ ಒತ್ತಡ ಹೆಚ್ಚಾಗಿ   ಯುರೆಡೋಸ್ಪೋರಸ್ ಒಡೆದು ಆತಿಥೇಯ ಸಸ್ಯದ ಎಪಿಡರ್ಮಿಸ್ ಬಿರಿದು ಬೀಜಕಗಳು ಹೊರಬರುತ್ತವೆ.

	ಯುರೆಡೋಸ್ಪೋರುಗಳು ಎರಡು ನ್ಯೂಕ್ಲಿಯಸ್ ಉಳ್ಳ ಬೀಜಕಗಳು. ಇವುಗಳ ಆಕಾರ ಅಂಡದಂತೆ ಬಣ್ಣಕಂದು. ಇವುಗಳ ಸುತ್ತ ಎಕ್ಸೋಸ್ಪೋರಿಯಮ್ ಮತ್ತು ಎಂಡೋಸ್ಪೋರಿಯಮ್ ಎಂಬ ಎರಡು ಕವಚಗಳಿವೆ. ಅಲ್ಲದೆ ಹೊರಕವಚದಲ್ಲಿ ಸಣ್ಣಮುಳ್ಳಗಳಂಥ ರಚನೆಗಳೂ ತೆಳುಪೊರೆಯುಳ್ಳ ಎರಡು ರಂಧ್ರಗಳ ಮೂಲಕ ಮೊಳೆನಳಿಕೆ (ಜರ್ಮ್ ಟ್ಯೂಬ್) ಹೊರಬರುತ್ತದೆ. 

	ಯುರೆಡೋಸ್ಪೋರ್‍ಗಳು ಹೆಚ್ಚು ಮೊತ್ತದಲ್ಲಿ ಉತ್ಪತ್ತಿಯಾಗಿ ಗಾಳಿ ಮತ್ತು ಕ್ರಿಮಿಕೀಟಗಳ ಸಹಾಯದಿಂದ ಬೇರೊಂದು ಆರೋಗ್ಯಕರವಾಗಿರುವ ಸಸ್ಯಕ್ಕೆ ತಾಗಿ ರೋಗವನ್ನು ಹರಡುತ್ತದೆ. ಇವು ಸ್ವಲ್ಪ ಕೆಲವೇ ಗಂಟೆಗಳಲ್ಲಿ ಮೊಳೆಯಬಲ್ಲವು. ಮೊಳೆತಾಗ ಅಪ್ರೆಸೋರಿಯಮ್ ಎಂಬ ರಚನೆಗಳನ್ನು ಉತ್ಪಾದಿಸಿ ಪತ್ರರಂಧ್ರದ ಮೂಲಕ ಹೊಸ ಆತಿಥೇಯ ಸಸ್ಯದ ಒಳಕ್ಕೆ ಸೇರಿ ಹಾಸ್ಪೋರಿಯ ಮೂಲಕ ಆಹಾರಾಂಶ ಪಡೆದು ಹೆಚ್ಚು ಮೈಸೀಲಿಯಮ್‍ಗಳನ್ನು ಬೆಳೆಸಿಕೊಳ್ಳುತ್ತವಲ್ಲದೆ ಮತ್ತೆ ಯುರೆಡೋಸ್ಪೋರುಗಳನ್ನು ಉತ್ಪತ್ತಿ ಮಾಡುತ್ತವೆ. 

	ಟೀಲೀಯ ಹಂತ : ತುಕ್ಕುರೋಗ ತಗುಲಿದ ಗೋದಿ ಬೆಳೆಯಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳ ಹೊತ್ತಿಗೆ ಯುರೆಡಿಯಲ್ ಹಂತ ಟೀಲೀಯ ಹಂತಕ್ಕೆ ಬದಲಾಗುತ್ತದೆ. ಮಚ್ಚೆಗಳು ಕಡು ಕಂದು ಬಣ್ಣವನ್ನು ತಳೆಯುವುದೇ ಈ ಬದಲಾವಣೆಯ ಚಿಹ್ನೆ. ಈ ಮಚ್ಚೆಗಳಲ್ಲಿ ಎರಡು ಜೀವಕೋಶಗಳಿಂದ ಕೂಡಿದ ಟೆಲ್ಯೂಟೋಸ್ಪೋರುಗಳು ಉತ್ಪತ್ತಿಯಾಗುತ್ತವೆ. ಕದಿರಿನ ಆಕಾರವನ್ನು ಪಡೆದಿರುವ ಇವಕ್ಕೆ ದಪ್ಪನೆಯ ಭಿತ್ತಿಯುಂಟು. ಈ ಬೀಜಕಗಳ ಜೀವಕೋಶಗಳ ನಡುವೆ ಅಡ್ಡ ಭಿತ್ತಿಯೊಂದುಂಟು. ಅಲ್ಲದೆ ಪ್ರತಿಯೊಂದು ಬೀಜಕದಲ್ಲೂ ಒಂದು ಉದ್ದನೆಯ ತೊಟ್ಟು ಇದೆ. ಟೆಲ್ಯೂಟೋಸ್ಪೋರುಗಳ ಉದ್ದ 35-60( ಅಗಲ 10-22(. ಪ್ರತಿ ಜೀವಕೋಶದಲ್ಲಿ ಮೊದಲ ಎರಡು ನ್ಯೂಕ್ಲಿಯಸುಗಳಿರುತ್ತವೆ. ಕ್ರಮೇಣ ಇವು ಕೂಡಿಕೊಂಡು ಒಂದೇ ನ್ಯೂಕ್ಲಿಯಸ್ ಆಗುತ್ತವೆ. ಟೆಲ್ಯೂಟೋಸ್ಪೋರಿನ ಪ್ರತಿ ಜೀವಕೋಶದಲ್ಲೂ ಒಂದೊಂದು ಮೊಳೆನಳಿಕೆ ಉಂಟು. ಟೆಲ್ಯೂಟೋಸ್ಪೋರುಗಳು ಕೂಡಲೇ ಮೊಳೆಯುವುದಿಲ್ಲ. ಬದಲಿಗೆ ಕೊಂಚಕಾಲ ವಿಶ್ರಾಂತಸ್ಥಿತಿಯಲ್ಲಿದ್ದು ಅನುಕೂಲ ಪರಿಸ್ಥಿತಿ ಒದಗಿದ ಮೇಲೆ ಮೊಳೆಯುವುವು. 

	ಬೆಸಿಡಿಯ ಹಂತ : ಬಿಡುಗಡೆಯಾದ ಟೆಲ್ಯೂಟೋಸ್ಪೋರ್‍ಗಳು ಮುಂದೆ ವಸಂತ ಋತು ಬರುವ ವರೆವಿಗೂ  ಮೊಳೆಯದೆ ಹಾಗೆಯೇ ಎಲೆಯ ಚೂರುಗಳ ಮೇಲಾಗಲೀ ಮಣ್ಣಿನಲ್ಲಾಗಲೀ ವಿಶಾಂ್ರತ ಸ್ಥಿತಿಯಲ್ಲಿರುವುವು. ಈ ಸಮಯದಲ್ಲಿ ಅವುಗಳಲ್ಲಿರುವ ನ್ಯೂಕ್ಲಿಯಸ್‍ಗಳು ಕೂಡಿ ಒಂದಾಗುತ್ತವೆ. ಬರುವ ವಸಂತಋತುವಿನ ಹೊತ್ತಿಗೆ ಟೆಲ್ಯೂಟೋಸ್ಪೋರಿನ ಪ್ರತಿ ಜೀವಕೋಶದ ಮೊಳೆ ರಂಧ್ರದಿಂದ ಕೊಳವೆಯಾಕಾರದ ಪ್ರೋಮೈಸೀಲಿಯಮ್ ಹೊರಬರುತ್ತದೆ. ಇದರಲ್ಲಿರುವ ನ್ಯೂಕ್ಲಿಯಸ್ ಎರಡುಸಾರಿ ವಿಭಜನೆಗೊಂಡು ನಾಲ್ಕು ನ್ಯೂಕ್ಲಿಯಸ್‍ಗಳನ್ನು ಉತ್ಪಾದಿಸುತ್ತದೆ. ಬೀಜಕದ ಎರಡು ಜೀವಕೋಶಗಳಿಂದ ತಲಾ ಒಂದೊಂದು ಕೊಳವೆ ಹೊರಬರುತ್ತದೆ. ಇದರ ತುದಿಭಾಗ 4 ಜೀವಕೋಶಗಳಾಗಿ ರೂಪುಗೊಂಡಿದೆ. ಒಂದೊಂದರಲ್ಲೂ ಒಂದೊಂದು ನ್ಯೂಕ್ಲಿಯಸ್ ಸೇರಿಕೊಳ್ಳುವುದು. ಅನಂತರ ಈ ಜೀವಕೋಶಗಳಿಂದ ಸ್ಪರಿಗ್ಮ ಎಂಬ ಒಂದು ಸಣ್ಣ ನಳಿಕೆ ಹೊರಬಂದು ಅದರ ತುದಿಯಲ್ಲಿ ಏಕಗುಣಿತ ನ್ಯೂಕ್ಲಿಯಸ್ ಉಳ್ಳ ಬೆಸಿಡಿಯೋಸ್ಪೋರುಗಳು ಉತ್ಪತ್ತಿಯಾಗುವುವು. ಯುರೆಡಿನೇಲೀಸ್ ಗಣದ ಶಿಲೀಂಧ್ರಗಳು ಹೆಟರೋಥ್ಯಾಲಿಕ್ ಆಗಿರುವುದರಿಂದ ಬೆಸಿಡಿಯೋಸ್ಪೋರುಗಳು ಧನಾತ್ಮಕ (+) ಅಥವಾ ಋಣಾತ್ಮಕ (-) ಲಕ್ಷಣವನ್ನು ಪಡೆದಿರುವುವು.

ಬೆಸಿಡಿಯೋಸ್ಪೋರ್ ಅಥವಾ ಸ್ಪೋರಿಡಿಯಮುಗಳು ಬಿಡುಗಡೆಗೊಂಡ ಗಾಳಿಯ ಸಹಾಯದಿಂದ ಪ್ರಸಾರವಾಗುತ್ತವೆ. ಸ್ಪೋರಿಡಿಯಮುಗಳು ಸೂಕ್ತ ಆತಿಥೇಯ ಸಸ್ಯದ ಸಂಪರ್ಕಕ್ಕೆ ಬಂದಾಗ ಮೊಳೆತು ಸಣ್ಣ ಹೈಫಗಳನ್ನು ಉತ್ಪಾದಿಸಿ ರೋಗದ ಸೋಂಕನ್ನು ಉಂಟುಮಾಡುತ್ತವೆ. ಆದರೆ ಬೆಸಿಡಿಯೋಸ್ಪೋರುಗಳಿಗೆ ಗೋದಿ ಸಸ್ಯದ ಮೇಲೆ ರೋಗದ ಸೋಂಕನ್ನು ಉಂಟು ಮಾಡುವ ಸಾಮಥ್ರ್ಯ ಇಲ್ಲ. ಆದರೆ ಇವು ಬರ್ಬೆರಿಸ್ ಮತ್ತು ಮಹೋನಿಯ ಜಾತಿಯ ಪರ್ಯಾಯ ಆತಿಥೇಯ ಸಸ್ಯಗಳನ್ನು ಅಂಟಿಕೊಂಡು ಶಿಲೀಂಧ್ರದ ಮುಂದಿನ ಜೀವನಚಕ್ರವನ್ನು ಮುಂದುವರಿಸಬಲ್ಲವು. 
ಸ್ಪರ್ಮಗೋನಿಯ ಹಂತ ಅಥವಾ ಪಿಕ್ನಿಯ ಹಂತ : ವಸಂತ ಋತುವಿನ ಆದಿ ಭಾಗದಲ್ಲಿ ಬೆಸಿಡಿಯೋಸ್ಪೋರುಗಳು ಬರ್ಬೆರಿಸ್ ಸಸ್ಯದ ಎಲೆಯ ಮೇಲೆ ಬಿದ್ದು ರೋಗದ ಸೋಂಕನ್ನು ಉಂಟುಮಾಡುತ್ತವೆÉ. ಹೀಗೆ ಬಿದ್ದ ಬೆಸಿಡಿಯೋಸ್ಪೋರುಗಳು ಮೊಳೆತಾಗ ಉಂಟಾಗುವ ಮೊಳೆ ನಳಿಕೆಗಳು ಪ್ರವೇಶಿಸಿ ಅನೇಕ ಮೈಸೀಲಿಯಮ್ ಎಳೆಗಳನ್ನು ಉತ್ಪಾದಿಸುವುವು. ಈ ಎಳೆಗಳು ಆತಿಥೇಯ ಸಸ್ಯದ ಜೀವಕೋಶದ ಒಳಪದರಗಳನ್ನು ಪ್ರವೇಶಿಸಿ ಹಾಸ್ಪೋರಿಯ ಮೂಲಕ ಆಹಾರಾಂಶವನ್ನು ಹೀರುತ್ತವೆ. ಈ ಮೈಸೀಲಿಯಮುಗಳ ಆಯಾ ಬೆಸಿಡಿಯೋಸ್ಪೋರಿನಲ್ಲಿ ಧನಾತ್ಮಕ (+) ಅಥವಾ ಋಣಾತ್ಮಕ (-) ತಳಿಗಳುಂಟು. ಇಂಥ ಬೆಸಿಡಿಯೋಸ್ಪೋರುಗಳು ಬರ್ಬೆರಿಸ್ ಎಲೆಯ ಮೇಲೆ ಬಿದ್ದು ಮೊಳೆತು ಮೈಸೀಲಿಯಮುಗಳನ್ನು ಉಂಟುಮಾಡುತ್ತವೆ. ಕೆಲವು ದಿನಗಳ ನಂತರ ಈ ಮೈಸೀಲಿಯಮುಗಳು ಬರ್ಬೆರಿಸ್ ಸಸ್ಯದ ಎಲೆಯ ಮೇಲ್ಭಾಗದಲ್ಲಿ ಪಿಕ್ನಿಯಗಳನ್ನು ಮತ್ತು ಎಲೆಯ ತಳಭಾಗದಲ್ಲಿ ಈಸಿಯಗಳನ್ನು ಉತ್ಪಾದಿಸುವುವು. ಪಿಕ್ನಿಯಗಳು ಆಸ್ಪಿಯೋಲ್ ಎಂಬ ರಂಧ್ರಗಳ ಮೂಲಕ ಹೊರಗಿನ ಸಂಪರ್ಕವನ್ನು ಪಡೆದಿರುವುವು. ಪಿಕ್ನಿಯಗಳ ಒಳಗೋಡೆಯÀ ತಳಭಾಗದಿಂದ ಸ್ಪರ್ಮೋಷಿಯೋಫೋರ್‍ಗಳು ಎಂಬ ರಚನೆಗಳು ಬೆಳೆದು ದುಂಡನೆಯ ಅಥವಾ ಅಂಡಾಕಾರದ ಪಿಕ್ನೋಸ್ಪೋರ್ಸ್ ಅಥವಾ ಸ್ಪರ್ಮೇಷಿಯಮ್ ಎಂಬ ಬೀಜಕಗಳನ್ನು ರೂಪಿಸುತ್ತವೆ. ಸ್ಪರ್ಮೇಷಿಯಗಳು ಒಂದು ತೆರನ ಸಿಹಿ ಅಂಟುದ್ರವದ ಸಮೇತ ಆಸ್ಪಿಯೋಲ್ ಮೂಲಕ ಹೊರಬೀಳುವುವು. ಆಸ್ಟಿಯೋಲಿನ ಒಳಬದಿಯಲ್ಲಿರುವ ಕೆಲವು ಜೀವಕೋಶಗಳು ರಿಸೆಪ್ಟಿವ್ ಹೈಫ ಎಂಬ ಎಳೆಯಾಕಾರದ ರಚನೆಗಳನ್ನು ಉತ್ಪತ್ತಿ ಮಾಡುತ್ತವೆ.
ಇವು ಸಹ ಅಂಟು ಸಿಹಿ ದ್ರವದೊಂದಿಗೆ ಆಸ್ಟಿಯೋಲ್ ಮೂಲಕ ಹೊರಚಾಚಿಕೊಳ್ಳುವುವು. ಬೇರೆ ತಳಿಗಳಿಂದ ಉಂಟಾದ ಸ್ಮರ್ಮೇಷಿಯಗಳು ಕ್ರಿಮಿಕೀಟಗಳ ಅಥವಾ ಗಾಳಿಯ ಸಹಾಯದಿಂದ ಈ ರಿಸೆಪ್ಟಿವ್ ಹೈಫಗಳೊಡನೆ ಸಂಪರ್ಕ ಪಡೆದು ಸಂಯೋಗವಾಗಿ ನಿಷೇಚನ ಕ್ರಿಯೆಯನ್ನು ಸಾಂಗಗೊಳಿಸುವುವು. ಅನಂತರ ಜೀವನಚಕ್ರದ ಮುಂದಿನ ಹಂತ ಪ್ರಾರಂಭವಾಗುತ್ತದೆ. 
ಈಸಿಯ ಹಂತ : ಬಾರ್ಬೆರಿ ಸಸ್ಯದ ಎಲೆಗಳಲ್ಲೆಲ್ಲ ಹರಡಿದ ಶಿಲೀಂಧ್ರದ ಮೈಸೀಲಿಯಮುಗಳು ಎಲೆಯ ತಳಭಾಗದಲ್ಲಿ ನಸುಹಳದಿ ಬಣ್ಣದ ಹಾಗೂ ಬಟ್ಟಲಿನಾಕಾರದ ರಚನೆಗಳನ್ನು ರೂಪಿಸುತ್ತವೆ. ಈ ರಚನೆಗಳಿಗೆ ಈಸಿಯಲ್ ಬಟ್ಟಲುಗಳೆಂದು ಹೆಸರು. 

	ಈ ರಚನೆಗಳ ತಳಭಾಗದಲ್ಲಿನ  ಮೈಸೀಲಿಯಮ್‍ಗಳಲ್ಲಿ  ಡೈಕ್ಯಾರಿಯೋಟೈಸೇಷನ್ ಎಂಬ ಪ್ರಕ್ರಿಯೆ ನಡೆದು ಅದರಿಂದ ಹೈಮೀನಿಯಮ್ ಎಂಬ ಉದ್ದನೆಯ ಜೀವಕೋಶಗಳ ಪದರವೊಂದು ರೂಪುಗೊಳ್ಳುತ್ತದೆ. ಈ ಜೀವಕೋಶಗಳಿಂದ ಈಸಿಡಿಯೋಸ್ಪೋರುಗಳೆಂಬ ಬೀಜಕಗಳು ಉತ್ಪತ್ತಿಯಾಗುತ್ತವೆ. ಈಸಿಡಿಯೋಸ್ಪೋರುಗಳ ನಡುವೆ ಕೆಲವು ಅಂತರ್ನಿವಿಷ್ಟ ಜೀವಕೋಶಗಳು ಅಥವಾ ವಿಯೋಜಕ ಜೀವಕೋಶಗಳು ಮೂಡುತ್ತವೆ. ಈಸಿಯಮ್ ಬಟ್ಟಲಿಗೆ ಪೆರಡಿಯಮ್ ಎಂಬ ತೆಳುವಾದ ಪೊರೆಯುಂಟು. ಈಸಿಯೋಸ್ಪೋರುಗಳು ಸರಪಣಿಯ ಸಾಲಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆÉ.  ಇದರಿಂದ ಒತ್ತಡ ಹೆಚ್ಚಾಗಿ ಪೆರಡಿಯಮ್ ಪದರ ಮತ್ತು ಎಪಿದರ್ಮಿಸ್ಗಳು ಬಿರಿದುಕೊಂಡು ಬೀಜಕಗಳು ಹೊರಬರುತ್ತವೆ. 

	ಈಸಿಯೋಸ್ಪೋರುಗಳ ಬಣ್ಣ ನಸುಹಳದಿ, ಆಕಾರ ಬಹುಭುಜಾಕಾರ. ಬೀಜಕಗಳ ಮಧ್ಯೆ ಇರುವ ಅಂತರ್ನಿವಿಷ್ಟ ಜೀವಕೋಶಗಳು ನಶಿಸಿಹೋಗುವುದರಿಂದ ಬೀಜಕಗಳು ಬಿಡಿಬಿಡಿಯಾಗುವುವು. ಇವುಗಳಲ್ಲಿ ದಪ್ಪನೆಯ ಹೊರಕವಚವೂ ಐದಾರು ಮೊಳೆರಂಧ್ರಗಳೂ ಎರಡು ನೂಕ್ಲಿಯಸುಗಳೂ ಉಂಟು. ಗಾಳಿಯ ಸಹಾಯದಿಂದ ಇವು ಪ್ರಸಾರವಾಗುತ್ತವೆ. ಬೀಜಕಗಳು ಬಾರ್ಬೆರಿ ಸಸ್ಯದ ಮೇಲೆ ಮೊಳೆಯಲಾರವು. ಆದರೆ ಗೋದಿ ಸಸ್ಯದ ಮೇಲೆ ಬಿದ್ದಾಗ ಅಲ್ಲಿ ಮೊಳೆತು ಪತ್ರರಂಧ್ರದ ಮೂಲಕ ಒಳಗೆ ಪ್ರವೇಶಿಸಿ ರೋಗದ ಸೋಂಕನ್ನು ಉಂಟುಮಾಡುತ್ತವೆ. ಅನಂತರ ಆತಿಥೇಯ ಸಸ್ಯದೊಳಗೆ ಡೈಕ್ಯಾರಿಯೋಟಿಕ್ ಹೈಫವನ್ನು ಉತ್ಪಾದಿಸುತ್ತ ಅನೇಕ ಮೈಸೀಲಿಯಮ್ ಎಳೆಗಳನ್ನೂ ಯುರೆಡೋಸ್ಪೋರುಗಳನ್ನೂ ಉತ್ಪತ್ತಿ ಮಾಡುತ್ತವೆ. 

	ತುಕ್ಕುರೋಗ ಶಿಲೀಂಧ್ರದಲ್ಲಿ ಜೈವ - ವೈಶಿಷ್ಟ್ಯ : ಪರಾವಲಂಬಿ ಜೀವನಕ್ರಮದಲ್ಲಿ ತುಕ್ಕುರೋಗ  ಶಿಲೀಂಧ್ರಗಳು ಹೆಚ್ಚಿನ ವೈಶಿಷ್ಟ್ಯವನ್ನು ತೋರುತ್ತವೆ. ಪಕ್ಸೀನಿಯ ಗ್ರ್ಯಾಮಿನಿಸ್ ಎಂಬುದರಲ್ಲಿ ಈ ದಿಸೆಯಲ್ಲಿ ಹೆಚ್ಚಿನ ಸಂಶೋಧನೆ ನಡೆದಿದೆ. ಈ ಪ್ರಭೇದದಲ್ಲಿ ವಿವಿಧ ರೀತಿಯ ತಳಿಗಳು (ಸ್ಟ್ರೇನ್ಸ್) ಇವೆ ಎಂದು ತಿಳಿದುಬಂದಿದೆ. ಈ ತಳಿಗಳು ಬೇರೆ ಬೇರೆ ಬೆಳೆಗಳ ಮೇಲೆ ದಾಳಿಮಾಡುತ್ತವೆ.
(1) ಗೋದಿಯ ಮೇಲೆ ಪಕ್ಸೀನಿಯ ಗ್ರ್ಯಾಮಿನಿಸ್ ಟ್ರಿಟಿಸೈ (2) ಬಾರ್ಲಿಯ ಮೇಲೆ ಪಕ್ಸೀನಿಯ ಗ್ರ್ಯಾಮಿನಿಸ್ ಹೋರ್ಡೈ ; (3) ರೈ ಗಿಡದ ಮೇಲೆ ಪಕ್ಸೀನಿಯ ಗ್ರ್ಯಾಮಿನಿಸ್ ಸಿಕಾಲಿಸ್. 
ಈ ತಳಿಗಳನ್ನು ಜೈವಕುಲಗಳಾಗಿ (ಬಯಾಲಾಜಿಕಲ್ ರೇಸ್) ಮತ್ತೆ ವಿಭಜಿಸಬಹುದು. ಉದಾಹರಣೆಗೆ ಪಕ್ಸೀನಿಯ ಗ್ರ್ಯಾಮಿನಿಸ್ ಟ್ರಿಟಿಸೈ ತಳಿಯಲ್ಲಿ 150 ಹೆಚ್ಚು ಜೈವಕುಲಗಳಿವೆ. ಇವು ಗೋದಿಯ ವಿವಿಧ ಬಗೆಗಳನ್ನು ಸೋಂಕಿ ರೋಗವನ್ನುಂಟು ಮಾಡುತ್ತವೆ.

ತುಕ್ಕುರೋಗವನ್ನು ತಡೆಗಟ್ಟುವ ವಿಧಾನಗಳು :

1  ತುಕ್ಕುರೋಗ ಶಿಲೀಂಧ್ರಗಳು ಅನೇಕ ಪರ್ಯಾಯ ಆತಿಥೇಯ ಸಸ್ಯಗಳ ಮೇಲೆ ಬರುವುದರಿಂದ ಇಂಥ ಆತಿಥೇಯಗಳನ್ನು ನಾಶಮಾಡುವುದು.

2  ಹೆಚ್ಚು ಸಾರಜನಕಯುಕ್ತ ಗೊಬ್ಬರ ಹಾಕಿದಲ್ಲಿ ತುಕ್ಕುರೋಗವು ತೀವ್ರಗೊಳ್ಳುವುದರಿಂದ ಸಾರಜನಕದ ಪ್ರಮಾಣವನ್ನು ಕಡಿಮೆ ಮಾಡಬೇಕು. 

3   ತುಕ್ಕುರೋಗದ ಬೀಜಕಗಳು ಮೊಳೆಯಲು ಆದ್ರ್ರತೆ ಸಹಾಯಕವಾಗಿರುವುದರಿಂದ ಜಮೀನಿನಲ್ಲಿ ನೀರು ಹರಿದು ಹೋಗುವಂತೆ ಕಾಲುವೆ ವ್ಯವಸ್ಥೆ ಮಾಡಬೇಕು.

4   ಪರ್ಯಾಯ ಆತಿಥೇಯ ಸಸ್ಯಗಳಾದ ಬಾರ್ಬೆರಿ, ಮಹೋನಿಯ, ಮುಂತಾದುವುಗಳನ್ನು ನಾಶಮಾಡಿ ಈ ರೋಗದ ಬೀಜಕಗಳ ಪ್ರಮಾಣವನ್ನು ಕಡಿಮೆ ಮಾಡಬಹುದು.

5 ಈ ರೋಗವನ್ನು ನಿರೊಧಿಸುವ ಉತ್ತಮ ತಳಿಯ ಗೋದಿಯನ್ನು ಬೆಳೆಸುವುದು.

6 ಡಾ. ಮೆಹ್ತಾರವರ ಸಂಶೋಧನೆಯ ಪ್ರಕಾರ ಭಾರತದ ಬೆಟ್ಟಪ್ರದೇಶದಲ್ಲಿ ಗೋದಿ ಬೆಳೆಯುವುದನ್ನು ನಿಲ್ಲಿಸುವುದರ ಮೂಲಕ ಅಲ್ಲಿಂದ ಗಾಳಿಯಲ್ಲಿ ಪ್ರಸಾರವಾಗುವ ಬೀಜಕಗಳು ಹೊಸ ಬೆಳಕನ್ನು ಪ್ರವೇಶಿಸುವುದನ್ನು ತಡೆಯಬಹುದು.
ತುಕ್ಕುರೋಗಗಳ ಮುಖ್ಯ ಬಗೆಗಳು.

ಆತಿಥೇಯ ಸಸ್ಯ 					ತುಕ್ಕುರೋಗದ ಶಿಲೀಂಧ್ರದ ಹೆಸರು			      1  ಗೋದಿ 					ಪಕ್ಸೀನಿಯ ಗ್ರ್ಯಾಮಿನಿಸ್ ಟ್ರಿಟಿಸೈ			    2 ಗೋದಿ					ಪಕ್ಸೀನಿಯ ಟ್ರಿಟಿಸಿನ
3  ಗೋದಿ					ಪಕ್ಸೀನಿಯ ಗ್ಲುಮೇರಮ್
4  ಓಟ್ಸ್					ಪಕ್ಸೀನಿಯ ಕಾರೊನೇಟಾ
5  ಸಜ್ಜೆ (ಕಂಬು )				ಪಕ್ಸೀನಿಯ ಪೆನಿಸಿಟೈ		 		6  ಜೋಳ					ಪಕ್ಸೀನಿಯ ಪರ್‍ಫ್ಯೂರಿಯ
7    ಮುಸುಕಿನ ಜೋಳ				ಪಕ್ಸೀನಿಯ ಸೋರ್ಗೈ
8  ಆಸ್ಟರಾಗಸ್ 				  	ಪಕ್ಸೀನಿಯ ಆಸ್ಪರ್ಗೈ
9  ಹಾಲಿಹಾಕ್					ಪಕ್ಸೀನಿಯ ಮ್ಯಾಲ್‍ವೇಸಿಯಾರಮ್	 	
10   ಲಿನ್ ಸೀಡ್				ಮೆಲಾಂಪ್ಯೂರ ಲಿನಿಯೈ
11 ಪೈನ್ 					ಕ್ರೊನೊರಟಿಯಮ್ ರ್ಯಾಬಿಕೋಲ
12 ಕಾಫಿ					ಹೆಮಿಲಿಯ ವೆಸ್ಟಾಟ್ರಿಕ್ಸ್
13 ಹುರುಳಿ					ಯುರೋಮೈಸಿಸ್ ಅಪೆಂಡಿಕುಲೇಟಸ್	 
14 ಬಟಾಣಿ					ಯುರೋಮೈಸಿಸ್ ಸಿಸಿರಿಯೆಂಟನಿ
15 ಬಟಾಣಿ					ಯುರೋಮೈಸಿಸ್ ಪೈಸಿ		
(ಎಸ್.ಆರ್.ವಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ